ಉಕ್ರೇನಿಯನ್ ಭಾಷೆ, ಸಾಹಿತ್ಯ
 	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಉಕ್ರೇನಿಯನ್ ಭಾಷೆ ವಂಶಪರಂಪರಾಗತವಾದ ಕೀವನ್‍ರಸ್‍ನ ಆಡುನುಡಿ. ಇದು ರಷ್ಯನ್‍ಗಿಂತ ಬಿಳಿರಷ್ಯನನ್ನೇ (ಬೈಲೊ ರಷ್ಯನ್) ಹೋಲುತ್ತದೆ. ಬಿಳಿರಷ್ಯನ್ ಭಾಷೆಗೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳೊಡನೆ ಒಳಭೇದಗಳಿರುವುದರಿಂದ ಬಿಳಿರಷ್ಯನ್ ಭಾಷೆ ಇವೆರಡು ಭಾಷೆಗಳಿಗೂ ಸಂಬಂಧ ಕಲ್ಪಿಸುತ್ತದೆ. ಆದರೆ ಉಕ್ರೇನಿಯನ್ ಮತ್ತು ರಷ್ಯನ್ ಭಾಷೆಗಳಿಗೆ ಬದಲಾವಣೆಯ ಒಳಭೇದಗಳಿರುವುದಿಲ್ಲ. ಉಕ್ರೇನಿಯನ್ ಉಪಭಾಷೆಯ ಲಕ್ಷಣಗಳು 12ನೆಯ ಶತಮಾನದ ಮಧ್ಯಯುಗದ ಹಸ್ತಪ್ರತಿಗಳಲ್ಲಿದೆ. ಅದರಲ್ಲೂ ಪಶ್ಚಿಮ ಭಾಗದಲ್ಲಿ ಕೀವ್ ನಗರ ನಾಶವಾದಾಗ, ಲಿಥುವೇನಿಯದ ಗ್ರಾಂಡ್ ಡಚಿಯಲ್ಲಿ ಉಕ್ರೇನಿನ ಅಧೀನಪ್ರಾಂತ್ಯದ ಕೆಲವು ಭಾಗಗಳನ್ನು ಕ್ರಮಕ್ರಮವಾಗಿ ವಿಲೀನಗೊಳಿಸಿದ ಆನಂತರ ಮೂಲರೂಪವಿದ್ದೆಡೆಗಳಲ್ಲಿ ಉಕ್ರೇನಿಯನ್ ಭಾಷೆಯ ಒಳಭೇದದ ಲಕ್ಷಣಗಳನ್ನು ಹೆಚ್ಚು ಹೆಚ್ಚಾಗಿ ಗುರುತಿಸಲಾಯಿತು. 
ಈ ರಾಜ್ಯದ ಆಡಳಿತ ಭಾಷೆ ಬಿಳಿರಷ್ಯನ್ ಆಗಿತ್ತು. ಅನಂತರ 16ನೆಯ ಶತಮಾನದಲ್ಲಿ ಪೋಲಿಷ್ ಆಡಳಿತ ಭಾಷೆಯಾಯಿತು. ಬಿಳಿರಷ್ಯನ್ ಮತ್ತು ಪೋಲಿಷ್ ಭಾಷೆಗಳನ್ನು ಆ ಕಾಲದಲ್ಲಿ ಕೇವಲ ಕಾನೂನಿನ ದಸ್ತಾವೇಜುಗಳಿಗಷ್ಟೇ ಮೀಸಲಾಗಿಡಲಾಗಿತ್ತು. 14ನೆಯ ಶತಮಾನದಿಂದಲೂ ಉಕ್ರೇನಿಯನ್ ಭಾಷೆ ಆಜ್ಞಾಪತ್ರಗಳಲ್ಲಿ ಹಾಗೂ ಖಾಸಗಿ ಬಳಕೆಯಲ್ಲಿ ಇತ್ತು. 16ನೆಯ ಶತಮಾನದಲ್ಲಿನ ಸುಧಾರಣೆಗಳು ಉಕ್ರೇನಿಯನ್, ಬಿಳಿರಷ್ಯನ್ ಹಾಗೂ ಪೋಲಿಷ್ ಧಾರ್ಮಿಕ ಸಾಹಿತ್ಯಕ್ಕೆ ಆಘಾತ ಉಂಟುಮಾಡಿತು. 17ನೆಯ ಶತಮಾನದಲ್ಲಿ ಉಕ್ರೇನಿಯನ್ ರೂಪದ ಚರ್ಚ್ ಸ್ಲವೋನಿಕರನ್ನು ರಾಷ್ಟ್ರೀಯ ಭಾವನೆ ಹೊಂದಿದ್ದ ಉಕ್ರೇನಿನ ಬುದ್ದಿಜೀವಿಗಳು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಸಮಕಾಲೀನವಾಗಿಯೇ ಈ ಭಾಷೆಯ ಹೆಚ್ಚು ಆಡುನುಡಿಯ ರೂಪವನ್ನು ವಿದ್ವತ್ಪೂರ್ಣ ಕವನ ಹಾಗೂ ವಿಡಂಬನ ದೃಶ್ಯಗಳಲ್ಲಿ ಉಪಯೋಗಿಸುತ್ತಿದ್ದರು. ಇವಾನ್ ಕೋತ್ಲ್ಯಾರೇವ್‍ಸ್ಕಿಯ ಎನೆಇಡಾದ ಜೊತೆಗೆ 18ನೆಯ ಶತಮಾನದ ಅಂತ್ಯದಲ್ಲಿ ಉಕ್ರೇನಿಯನ್ ಭಾಷೆಯ ನೂತನ ರೂಪ. ಈ ಆಡುನುಡಿಯ ವಿನ್ಯಾಸದಿಂದ ಹೊರಹೊಮ್ಮಿತು. ಅಂದಿನಿಂದೇಚೆಗೆ ನೂತನ ರೂಪದ ಬಿಳಿರಷ್ಯನ್ ಭಾಷೆಯನ್ನು ಸಾಹಿತ್ಯ ಮತ್ತು ಇತರ ಶೈಕ್ಷಣಿಕ ಹಾಗೂ ಆಡಳಿತ ವಿಷಯಗಳಲ್ಲೂ ಬಳಸಲಾಗುತ್ತಿದೆ. ಬಿಳಿರಷ್ಯನ್ ಭಾಷೆಯಂತೆಯೇ ಪ್ರಾಥಮಿಕ ಭಾಷಾ ಲಕ್ಷಣಗಳು ಸ್ವತಂತ್ರವಾಗಿ ಅಭಿವೃದ್ಧಿಯಾಗುವಂಥವಾದರೂ ಉಕ್ರೇನಿಯನ್ ಭಾಷೆ ಪೋಲಿಷ್ ಭಾಷೆಯ ಅನೇಕ ಪದಗುಚ್ಛಗಳನ್ನೇ ಅಲ್ಲದೆ ಆಭಿವ್ಯಕ್ತಿಗಳನ್ನೂ ಒಳಗೊಂಡಿದೆ.
	
11ನೆಯ ಶತಮಾನದಿಂದ ಮಂಗೋಲ್-ಟಾರ್ಟರ್ ಅತಿಕ್ರಮಣವಾದ 13ನೆಯ ಶತಮಾನದವರೆಗಿನ ಕಾಲದಲ್ಲಿ ಉಕ್ರೇನಿಯನ್ ಜನಾಂಗದ ಸಾಹಿತ್ಯ ಪರಂಪರೆ ರಷ್ಯನ್ ಹಾಗೂ ಬಿಳಿರಷ್ಯನ್ ಸಾಹಿತ್ಯ ಪರಂಪರೆಯಂತೆಯೇ (ಅಂದರೆ, ಕೀವನ್‍ರೂಸ್‍ನ ಸಾಹಿತ್ಯ) ಇತ್ತು. ಕೀವನ್‍ರೊಸ್‍ನ ಪತನದಿಂದಾಗಿ 13ನೆಯ ಶತಮಾನದಿಂದ 16ನೆಯ ಶತಮಾನದವರೆಗಿನ ಅದರ ಸಾಹಿತ್ಯ ಇಳಿಮುಖಗೊಂಡಿತು. ಆನಂತರ ಸಾಮಾಜಿಕ ಹಾಗೂ ವಿದೇಶೀಯ ದಬ್ಬಾಳಿಕೆಯ ವಿರುದ್ಧ ಹೋರಾಟ ಹಾಗೂ ಶಿಕ್ಷಣ, ಮುದ್ರಣಗಳಲ್ಲಿ ಪ್ರಗತಿ ಸಾಧಿಸಲು ಪಟ್ಟ ಶ್ರಮ—ಇವುಗಳಿಂದ ಸಾಹಿತ್ಯಕ್ಕೆ ಪುನಶ್ಚೇತನವಾಯಿತು. ಆನೇಕ ಹೊಸ ಬರೆಹಗಾರರು ಹುಟ್ಟಿಕೊಂಡರು. ಅವರಲ್ಲಿ ಪ್ರಸಿದ್ಧಿ ಪಡೆದವ ಇವಾನ್ ವಿಶೆನ್‍ಸ್ಕಿ (ನಿ. 1925). 15 ರಿಂದ 17ನೆಯ ಶತಮಾನದವರೆಗಿನ ಸಾಹಿತ್ಯದ ಗುಣವಿಶೇಷವೆಂದರೆ ವೀರಗೀತೆಗಳು (ಮಹಾಕಾವ್ಯ). ಚಾರಿತ್ರಿಕ ಹಾಡುಗಳು ಹಾಗೂ ಲಾವಣಿಗಳು. 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಧರ್ಮೋಪದೇಶ, ಚಾರಿತ್ರಿಕ ಗದ್ಯ, ಶಾಲಾ ನಾಟಕಗಳು, ಭಾವಗೀತೆ ಹಾಗೂ ವಿಡಂಬನ ಕಾವ್ಯಗಳು ಆಭಿವೃದ್ಧಿಹೊಂದಿದವು. ಹ್ರಿಹೋರಿ ಸ್ಕವರದಾ (1722-94)ಎಂಬ ಪ್ರಜಾಪ್ರಭುತ್ವ ಪ್ರಬೋಧಕ ಸಾಮಾಜಿಕ ನ್ಯಾಯದ ವಿಚಾರವನ್ನು ತನ್ನ ವೇದಾಂತ ಪ್ರಕರಣಗ್ರಂಥ, ಕಾಲ್ಪನಿಕ ಕಥೆ ಮತ್ತು ಕವನಗಳ ಮೂಲಕ ಪ್ರತಿಪಾದಿಸಿದ್ದಾನೆ. 
ಚರ್ಚ್‍ಸ್ಲವೋನಿಕ್ ಹಳೆಯ ಕಾಲದ ಸಾಹಿತ್ಯ ಭಾಷೆಯ ಅಡಿಗಲ್ಲಾಗಿತ್ತು. ಹೆಜ್ಜೆ ಹೆಜ್ಜೆಯಾಗಿ ದೇಶೀಯ ಭಾಷೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 18ನೆಯ ಶತಮಾನದ ಅಂತ್ಯದಲ್ಲಿ ಹಾಗೂ 19ನೆಯ ಶತಮಾನದ ಆರಂಭದಲ್ಲಿ ದೇಶೀಯ ಭಾಷೆ ನಿಜವಾಗಿಯೂ ಸುಸ್ಥಿತಿಯಲ್ಲಿತ್ತು. ಈ ಹೋರಾಟದಲ್ಲಿ ಇವಾನ್ ಕೋತ್ಲ್ಯಾರೇವ್‍ಸ್ಕಿಯ ಪಾತ್ರ ಪ್ರಮುಖವಾಗಿತ್ತು. ಇವನ ಕೃತಿಗಳು ವರ್ಜಿಲನ ಪ್ರಹಸನ ಮತ್ತು ಎನೆಇಡ ದೇಶೀಯ ಭಾಷೆಯಲ್ಲಿನ ಪ್ರಥಮ ಗ್ರಂಥ. ನಿತ್ಯಜೀವನಕ್ಕೆ ಸಂಬಂಧಿಸಿದ ಏಕಾಂತ ಸಂಗೀತ ನಾಟಕ. ನಾಟಲ್ಕ ಪೊಲ್ತಾವ್ಕ ಈತನ ಮತ್ತೊಂದು ಕೃತಿ.
	
19ನೆಯ ಶತಮಾನದ ಸಾಹಿತ್ಯದಲ್ಲಿ ವಾಸ್ತವಿಕತೆಗೆ ಜಯ ದೊರಕಿತು. ನಿಯತಕಾಲಿಕಗಳು, ಇತಿಹಾಸ ಲೇಖನಗಳು. ಉತ್ತಮ ನಾಟಕಗಳು ಜಾನಪದ ಸಂಗ್ರಹಗಳು ಪ್ರಕಟಗೊಂಡುವು. ಪೆತ್ರೊ ಗುಲಾಕ್ ಅರ್ತೆಮೋವೆಸ್ಕಿ (1790-1865) ಪ್ರಹಸನಗಳನ್ನು ರಮ್ಯಸಾಹಿತ್ಯಗಳನ್ನು ಅದರಲ್ಲೂ ಕಾಲ್ಪನಿಕ ಕಥೆಗಳನ್ನು ರಚಿಸಿದ. ಇವ್ಗೆನ್ ಗ್ರಿಬಿಂಕ (1812-48) ನೈಜ ಕಥೆಗಳನ್ನು, ಭಾವಗೀತೆಗಳನ್ನು ರಚಿಸಿದ. ಈತ ಲಾಸ್ತಿವ್ಕ ಅಲ್‍ಮಾನಾಕ್‍ನ (1841) ಸಂಪಾದಕನಾಗಿದ್ದ. ಗ್ರಿಗೋರಿಕ್ವೀತ್ಕ (1778-1843) ಒಬ್ಬ ಅಸಾಮಾನ್ಯ ಗದ್ಯ ಲೇಖಕ. ಈತ ನಿತ್ಯಜೀವನವನ್ನು ಕುರಿತ ಕಾದಂಬರಿಗಳ ಕರ್ತೃ. ಅವುಗಳಲ್ಲಿ ಮಾರುಸ್ಯ ಹಾಗೂ ಸೆರ್ದೇಚ್ನ ಅಕ್ಸಾನಗಳೂ ಸೇರಿವೆ. ಪಶ್ಚಿಮ ಉಕ್ರೇನಿನಲ್ಲಿ ಮತ್ತು ಅನಂತರ ಆಸ್ಟ್ರಿಯನ್ ಆಳ್ವಿಕೆಯಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಿವರು: ಮಾರ್ಕಿಯಾನ್ ಷಷ್ಕೆವಿಚ್ (1811-43). ಯಾಕಿಫ್ ಗಲೋವಾತ್ಸ್‍ಕಿ (1814-88) ಇವಾನ್ ವಹಿಲೇವಿಚ್ (1811-66). ಗಹನವಾದ ಅನುಭವ ದರ್ಶನಗಳಲ್ಲಿ ಅಲೆಕ್ಸಾಂಡರ್ ದುಕ್ನೊವಿಚ್ ಅಸಾಮಾನ್ಯನಾಗಿದ್ದ. 
ಆಧುನಿಕ ಉಕ್ರೇನಿಯನ್ ಭಾಷೆಯ ಸಂಸ್ಥಾಪಕನೆಂದರೆ ತರಾಸ್ ಷೆವ್‍ಚೆಂಕೊ (1814-61) ಈತ ಬುದ್ದಿಜೀವಿ. ಕವಿ, ಗದ್ಯಲೇಖಕ, ನಾಟಕಕಾರ, ದಾರ್ಶನಿಕ. ಕಲೆಗಾರ, ಕ್ರಾಂತಿಕಾರಿ ಪ್ರಜಾಪ್ರಭುತ್ವವಾದಿ, ಸಾಮಾಜಿಕ, ರಾಷ್ಟ್ರೀಯ ದಬ್ಬಾಳಿಕೆಯ ವಿರುದ್ಧ ಹೋರಾಟಗಾರ-ಈ ಎಲ್ಲವೂ ಆಗಿದ್ದ. ಇವನ ಮೊದಲ ಕವನ ಸಂಕಲನ ಕೊಬ್ಜಾರ್ (1840). ಇದು ಉಕ್ರೇನಿಯನ್ ಪ್ರಜೆಗಳ ಆಧ್ಯಾತ್ಮಿಕ ಜೀವನದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಷೆವ್‍ಚೆಂಕೊವಿನ ಗದ್ಯ ಬರಹದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವಳೆಂದರೆ ಮಾರ್ಯ ವಿಲಿನ್‍ಸ್ಕಾಯ (1833-1907). ಇವಳು ಓ.ಮಾರ್ಕೊವಿಚ್‍ನ ಪತ್ನಿ. ಇವಳ ಅತ್ಯುತ್ತಮ ಕೃತಿಯೆಂದರೆ ನರೋದ್ನಿ ಒಪವಿದಾನ್ಯ (ಜಾನಪದ ಕಥೆಗಳು, 1857). ನೈಜಕವನಗಳನ್ನು ಅಭಿವೃದ್ಧಿಪಡಿಸಿದವರೆಂದರೆ ಲಿಯೋನಿಡ್ ಗ್ಲಿಬೋಯ್ (1827-93), ಸ್ಚಿಪಾನ್ ರುದಾನ್‍ಸ್ಕಿ (1834-73) ಇವಾನ್ ಮನ್‍ಜûೂರ (1851-93), ಪಾವ್ಲೊ ಗ್ರಬೊವ್‍ಸ್ಕಿ (1864-1902) ಹಾಗೂ ಮತ್ತಿತರರು. ಷೆವ್‍ಚೆಂಕೊ ಹಾಗೂ ಮಾರ್ಕೊವೊವ್ ಚೊಕ್‍ರ ಗದ್ಯರೀತಿಯ ಅನುಯಾಯಿಗಳೆಂದರೆ ಯೂರಿಫೆಡ್ ಕೊವಿಚ್ (1834-88), ಅನತೋಲ್ ಸ್ವಿದ್ನಿತ್‍ಸ್ಕಿ (1834-71). ಇವಾನ್ ಲೆವಿತ್‍ಸ್ಕಿ (1838-1918). ಇವಾನ್ ಲೆವಿತ್‍ಸ್ಕಿಯ ಉತ್ತಮ ಕೃತಿಗಳೆಂದರೆ ಮಿಕೋಲ ಜೇರ್ಯ ಹಾಗೂ ಕಯದಾಷವ ಸೀಮ್ಯ. 19ನೆಯ ಶತಮಾನದ ಅಂತ್ಯ ಭಾಗದಲ್ಲಿನ ಅತ್ಯುತ್ತಮವಾದ ನೈಜ ನಾಟಕಕಾರರೆಂದರೆ ಮಿಹೈಲೋಸ್ತರೀಸ್ಕಿ (1840-1904). ಮಾರ್ಕೋ ಕ್ರಪಿವ್ನಿತ್ ಸ್ಕಿ (1840-1910) ಹಾಗೂ ಇವಾನ್ ತೊಬಿಲೆವಿಚ್ (1845-1907). ಇವನ ಕಾವ್ಯನಾಮ ಕರ್ಪೆಂಕಕಾರಿ. ಇವರು ಬಹಳ ಕಾರ್ಯಶೀಲ ಲೇಖಕರಾಗಿದ್ದರು. ಉತ್ತಮ ವಿಮರ್ಶಕ ಹಾಗೂ ಪ್ರಕಾಶಕನಾಗಿದ್ದ ಮಿಹೈಲ ದ್ರಗಮಾನಫ್ (1841-95) ಸಾಮಾಜಿಕ ಹಾಗೂ ಸಾಹಿತ್ಯಕ ಕ್ಷೇತ್ರಗಳಲ್ಲಿ ನಿರ್ವಹಿಸಿದ ಪಾತ್ರ ಪ್ರಮುಖವಾದದ್ದು. 
	
ಉಕ್ರೇನಿಯನ್ ಸಾಹಿತ್ಯದ ಅಭಿವೃದ್ಧಿಯ ಒಂದು ಹೊಸಮಜಲು ಮತ್ತು ಇವಾನ್ ಫ್ರಾಂಕೋನ (1856-1919) ಹೆಸರು ಎರಡೂ ಅವಿಭಾಜ್ಯವಾಗಿವೆ. ಈತ ಗಾಲ್ ದೇಶದ ಕ್ರಾಂತಿಕಾರಿ ಬರೆಹಗಾರ ಹಾಗೂ ಬುದ್ಧಿಜೀವಿ. ಇವನು ವಿಮರ್ಶಾತ್ಮಕ ವಾಸ್ತವಿಕತೆಯನ್ನು ಉನ್ನತಮಟ್ಟಕೆ ಏರಿಸಿದ. ದುಡಿಮೆಗಾರರ ಬದುಕು, ಹೋರಾಟಗಳನ್ನು ಬೋ-ಕನ್‍ಸ್ಟ್ರಿಕ್ಟರ್, ಬಾರಿಸ್ಲಾವ್ ಸ್ಮಿಯೇತ್ಸ್ಯಗಳಲ್ಲಿ ಚಿತ್ರಿಸಿದ್ದಾನೆ. 
	
1880ನೆಯ ದಶವರ್ಷ ಮಿಹೈಲೋ ಪಾವ್ಲಿಕ್ (1853-1915). ಸ್ತಿಪಾನ್ ಕವಾಲಿಫ್ (1848-1920) , ನತಾಲ್ಯ ಕಬ್ರೀನ್ಸ್ಕ್ (18512-1920) ಚಿಮಫೈಬರ್ದುಲ್ಯಾಕ್ (1863-1936) ಓಸಿಪ್‍ಮಕವ್ಯೆ (1867-1925) ಅಗತಾಂಗಿಲ್‍ಕ್ರಿಮ್‍ಸ್ಕಿ (1871-1941) ಹಾಗೂ ಇನ್ನಿತರರು ನೀಡಿದ ಸಮೃದ್ಧ ಸಾಹಿತ್ಯದಿಂದ ಮೈತುಂಬಿಕೊಡಿತು. 
ಹಿಂದಿನವರು ನಡೆದು ಬಂದ ದಾರಿಯಲ್ಲಿ ಹೆಜ್ಜೆಯಿಟ್ಟವರಲ್ಲಿ ನೈಜ ಗದ್ಯಸಾಹಿತ್ಯ ಪ್ರವೀಣರಾದ ವಸೀಲ್ ಸ್ಟಿಫಾನಿಕ್(1874-1936). ಇವಾನ್ ಸಿಮನ್ಯೂಕ್ (1871-1927), ಲೆಸ್ ಮರ್ತೋವಿಚ್ (1871-1919) ಓಲ್ಗಕಬಿಲ್ಯಾನ್ಸ್ಕ (1865-1942). ಅರ್ಹಿಪ್ ಚಿಸ್ಲೆಂಕ (1882-1911), ಸ್ತಿಪಾನ್ ಪನಾಸೆಂಕ (1871-1932) ಮತ್ತು ಕವಿಗಳಾದ ಓಲೊಜಿಮಿರಿ ಸಮೋಯ್ಲೆಂಕ (1864-1925), ಮಿಕೋಲ ವರೋನಿ (1871-1942), ಅಲೆಸ್ ಇವರು ಮುಖ್ಯರು.
20ನೆಯ ಶತಮಾನದ ಅತ್ಯಂತ ಪ್ರಸಿದ್ಧ ಲೇಖಕರೆಂದರೆ ಲೇಸ್ಕ ಉಕ್ರಾಯಾಕ (1871-1913) ಹಾಗೂ ಮಿಹೈಲೋ ಕುತ್ಸುಉಬಿನ್‍ಸ್ಕಿ (1864-1913) ಲೇಸ್ಯ ಉಕ್ರಾಯಾಕನ ಕೃತಿಗಳು ಅನೇಕ ಭಾವಗೀತೆಗಳು ಪದ್ಯರೂಪಕಗಳು ಹಾಗೂ ಸಂವಾದಗಳನ್ನೊಳಗೊಳ್ಳುತ್ತವೆ. ಕುತ್ಸುಉಬಿನ್‍ಸ್ಕಿ ನೈಜ ಗದ್ಯಸಾಹಿತ್ಯದ ಹಾಗೂ ನಾಡಿನ ಸ್ವಾತಂತ್ರ್ಯ ಪ್ರೇಮಿಗಳ ವಕ್ತಾರ ಕವಿಯಾಗಿದ್ದ. 1917ನೆಯ ಇಸವಿಯಲ್ಲಿ ನಡೆದ ಕ್ರಾಂತಿಗೆ ಮುಂಚಿನ ಉಕ್ರೇನಿಯನ್ ಸಾಹಿತ್ಯ ಫ್ರಾಂಕೋ ಹಾಗೂ ಇವರಿಬ್ಬರ ಸಾಹಿತ್ಯ ಕೊಡುಗೆಯಿಂದಾಗಿ ಸಮೃದ್ಧಿಗೊಂಡಿತು.
	
ಕ್ರಾಂತಿಯಾದನಂತರ ಉಕ್ರೇನಿಯನ್ ಸಾಹಿತ್ಯದ ನವಯುಗ ಆರಂಭವಾಯಿತು. ಜನತೆಯ ಹಿತವನ್ನು ಕಾಯ್ದುಕೊಳ್ಳುವ ಆದರ್ಶ ಹಾಗೂ ಸಮಾಜವಾದದ ನಿರ್ಮಾಣಗಳು ಹೊಸ ಸೌಂದರ್ಯೋಪಾಸನೆಯ ಮೌಲ್ಯಗಳನ್ನು ಎತ್ತಿಹಿಡಿದುವು. ಇದು ವಾಸ್ತವಿಕ ಸಮಾಜವಾದದ ವಿಧಾನ. ನವ್ಯಕವಿಗಳು, ಕ್ರಾತಿಕಾರಿ ಕವಿಗಳು ಸಮಷ್ಟಿವಾದಿಗಳು, ಮಾನವತಾವಾದಿಗಳು ಇವರು: ಪಾವ್ಲೊ ತಿಚೀನಾ (1891- ) ವಸೀಲ್ ಎಲಾಂಸ್ಕಿ (1893-1923), ಓಲಜಿಮಿರ್ ಸಸ್ಯೂರ (1898-1965) ಮಿಕೋಲ ಬಷಾನ್ (1904-1969) ಹಾಗೂ ಮಾಕ್ಸಿಮ್‍ರಿಲ್‍ಸ್ಕಿ (1895-1964), 1920ರ ಅನಂತರದ ತರುಣದಲ್ಲಿ ಮಹಾಗದ್ಯದ ಕ್ಷೇತ್ರದಲ್ಲಿ ಉನ್ನತ ಬೆಳೆವಣಿಗೆಯುಂಟಾಯಿತು. ಆಂದ್ರೀ ಗಲೋಫ್‍ಕ (1897- ) ಪೆತ್ರೋ ಪಾಂಚೆಂಕ (1891- ) ಯೂರಿಯನೋಫ್‍ಸ್ಕಿ (1902-1954) ಹಾಗೂ ಪಾವ್ಲೊ ಗುಬ್ಯೆಂಕೊ (ಕಾವ್ಯನಾಮ ಅಸ್ತಾಪ್ ವೀಷ್ಣ್ಯ. (1889-1956) ಇವರೆಲ್ಲರೂ ಸಾಮಾಜಿಕ ಕಾದಂಬರಿಗಳ ಪ್ರತಿಪಾದಕರಾಗಿ, ರಾಷ್ಟ್ರೀಯ ವಿನೋದ ಹಾಗೂ ವಿಡಂಬನೆಯ ಶಾಲೆಯನ್ನು ನಿರ್ಮಿಸಿ, ಅದಕ್ಕೆ ತಕ್ಕ ಅನುಯಾಯಿಗಳನ್ನು ದೊರಕಿಸಿದರು. ನಾಟಕಗಳು ಜಯಭೇರಿ ಹೊಡೆದು ವೃತ್ತಿನಾಟಕಸಂಸ್ಥೆ ಹಾಗೂ ಹವ್ಯಾಸಿ ನಾಟಕಸಂಸ್ಥೆಗಳು ಉತ್ತಮರೀತಿಯಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದುವು. ಅದರಲ್ಲಿ ಉತ್ತಮವಾದ ನಾಟಕಕರ್ತೃಗಳು: ಯಕೀಫ್ ಮಮಂತೋಫ್ (1888-1940) ಹಾಗೂ ಇವಾನ್ ದ್ವಿಪ್ರೋವ್‍ಸ್ಕಿ (1895-1934) , ಮಿಕೋಲ ಕೂಲಿಷ್ (1881-1952) ಎಂ.ಇರ್ಚನ್. ಐ. ಮಿಕಿಚ್ಯಂಕ ಹಾಗೂ ಅಲೆಕ್ಸಾಂಡರ್ ಕೋರ್ನೀಚುಕ್ (1905- ) 1939ರವರೆಗೆ ಪೋಲೆಂಡಿನ ಒಂದು ಭಾಗವಾಗಿದ್ದ ಪಶ್ಚಿಮ ಉಕ್ರೇನಿನಲ್ಲಿ ಕ್ರಾಂತಿಕಾರಿ ಸಾಹಿತ್ಯದ ಅಭಿವೃದ್ಧಿಯಾಯಿತು. ಅದಕ್ಕೆ ಮುಖ್ಯ ಕಾರಣರೆಂದರೆ ಅಲೆಕ್ಸಾಂಡರ್ ಗವ್ರಿಲ್ಯೂಕ್ (1911-1941), ಸ್ವಿಫಾನ್ ಅಲೆಕ್ಸ್ಯೂಕ್ (1892-1941) ಪೆತ್ರೊ ಕಸ್ಲಾನ್ಯೂಕ್ (1904-1965) ಮತ್ತು ಯರಾಸ್ಲಾಫ್ ಗಲಾನ್ (1902-49).
1920ರ ಮತ್ತು 1930ರ ನಡುವಣ ಸಾಹಿತ್ಯದ ಮುಖ್ಯ ಲಕ್ಷಣವೆಂದರೆ ಪ್ರಧಾನಸ್ವರಗತಿಯ ಎಲ್ಲೆಯ ವಿಸ್ತರಣೆ. ಜೀವನದ ಕ್ರಾಂತಿಕಾರಿ ಬದಲಾವಣೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳ ಉದ್ಬವ, ನೂತನ ರೂಪದ ನಾಯಕನ ಅವತಾರ. ಎಲ್ಲ ರೀತಿಯ ಸಾಹಿತ್ಯಶೈಲಿಯ—ಅದರಲ್ಲೂ ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳು, ವಿಜ್ಞಾನ ಕಾಲ್ಪನಿಕ ಮತ್ತು ಸಾಹಸ ಕಾದಂಬರಿಗಳು, ಪುರಾಣ ಕಾವ್ಯಗಳು ಮತ್ತು ಯುವಜನಾಂಗದ ಹಾಗೂ ಎಳೆಯರ ಸಾಹಿತ್ಯ ಶೈಲಿಗಳ—ಅಭಿವೃದ್ಧಿ. 
	
ಎರಡನೆಯ ಮಹಾಯುದ್ಧವಾದ ಅನಂತರ ರಾಷ್ಟ್ರಪ್ರೇಮ. ಸಮರವಿರೋಧಿ ಮತ್ತು ಮಾನವೀಯ ಮೌಲ್ಯಗಳು ಸಾಹಿತ್ಯವನ್ನು ಪ್ರವೇಶಿಸಿದುವು. ಅಲೆಕ್ಸಾಂಡರ್ ಗೊಂಚಾರ್ (1918- ) ಪ್ರಪರನೋಸ್‍ತ್ಸಿಯಲ್ಲಿ ಮತ್ತು ಮಿಹೈಲ ಸ್ತೇಲ್ ಮಹ್ (1912- ) ಅನೇಕ ಕಾದಂಬರಿಗಳ ಸರಣಿಯಲ್ಲಿ ಹಾಗೂ ವೈಲಿಕರಿದ್ನ್ಯದಲ್ಲಿ ರಾಷ್ಟ್ರೀಯ ಜೀವನದ ವಿಶಾಲ ಕಾವ್ಯರೂಪಕವನ್ನು ನೀಡಿದರು. ಯೂರಿಸ್ಮೋಲಿಚ್ (1900- ), ನತಾನ್ ರಿಬಾಕ್ (1913- ), ಸಿವ್ಯೋನ್ ಸ್ಕ್ಲರ್ಯಂಕ (1901-1962) ಹಾಗೂ ಅಲೆಕ್ಸಾಂಡರ್ ಇಲ್‍ಚಿಂಕ ಇವರು ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದರು. 
 
ಆಂದ್ರೀ ಮಾಲಿಷ್ಠ (1912- ), ಸ್ಚಿಪಾನ್ ಅಲೀಯ್ ನ್ಯೂಕ್ (1908- ) ಎಲ್. ಪಿರ್ವಮಾಯ್‍ಸ್ಕೆ (1908- ), ಪಿ.ವೊರಂಕೊ ಮತ್ತು ಡಿ. ಪವ್ಲೀಚ್ಕ ಮೊದಲಾದವರು ಕಾವ್ಯ ಪ್ರಪಂಚಕ್ಕೆ ಗಮನಾರ್ಹವಾದ ಕೊಡುಗೆಗಳನ್ನು ನೀಡಿದವರು. 
 
ಅಲೆಕ್ಸಾಂಡರ್ ದೆದವ್‍ಷೆಂಕ (1894-1956) ಅಸಾಮಾನ್ಯ ಬುದ್ಧಿಯುಳ್ಳ ವ್ಯಕ್ತಿಯೆಂದು ಹೆಸರುಗಳಿಸಿ, ಕಲೆಗಾರನಾಗಿ ಯಶಸ್ಸುಗಳಿಸಿ, ಚಲನಚಿತ್ರ ನಿರ್ಮಾಪಕನೂ ನಾಟಕಕಾರನೂ ಕಾದಂಬರಿಕಾರನೂ ಪ್ರಕಾಶಕನೂ ಆಗಿದ್ದ.
 
ಒಟ್ಟಿನಲ್ಲಿ ಹೇಳುವುದಾದರೆ ಉಕ್ರೇನಿಯನ್ ಸಾಹಿತ್ಯ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದೊಡನೆ ತುಂಬ ನಿಕಟ ಸಂಬಂಧವನ್ನು ಹೊಂದಿದೆ. ಅದಕ್ಕೆ ತಾರಾಸ್‍ಷೆವ್ ಚೆಂಕೂ ನೀಡಿರುವ ಕೊಡುಗೆ ಅತ್ಯಂತ ಗಮನೀಯವಾದುದಾಗಿಯೂ ಅಗಾಧವಾಗಿಯೂ ಇದೆ. ಇಂದಿಗೂ ರಾಷ್ಟ್ರದ ಅತ್ಯುತ್ತಮ ಬರೆಹಗಾರರು ಹಾಗೂ ಕವಿಗಳಿಗೆ ಈತನ ಹೆಸರಿನಲ್ಲಿ ಬಹುಮಾನ ನೀಡಲಾಗುತ್ತಿದೆ.
	
ಇಂದಿನ ಆಧುನಿಕ ಉಕ್ರೇನಿಯನ್ ಸಾಹಿತಿಗಳು ಹಿಂದಿನವರ ಕೃತಿಘನತೆ ಹಾಗೂ ಉನ್ನತಗುಣ ಮೌಲ್ಯಗಳನ್ನು ಗೌರವಿಸಿ ಅವರ ಪರಂಪರೆಯ ಹಾದಿಯಲ್ಲಿಯೇ ಮುನ್ನಡೆದು ಕೃತಿರಚನೆ ಮಾಡುತ್ತಿರುವರು.				
(ಕೆ.ಬಿ.ಎಂ.)